ಐದು ದಶಕಗಳಿಂದ ಎಂಎಸ್‍ಐಎಲ್ ತನ್ನ ಪ್ರಸಿದ್ಧ ಬ್ರಾಂಡ್‍ಗಳಾದ “ವಿದ್ಯಾ” ಮತ್ತು “ಲೇಖಕ್” ಹೆಸರಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ನೋಟ್ ಬುಕ್‍ಗಳಿಗಾಗಿ ವಿದ್ಯಾರ್ಥಿಗಳ ದೀರ್ಘಕಾಲಿಕ ಬೇಡಿಕೆಯನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ವಿದ್ಯಾರ್ಥಿಗಳ ನೋಟ್ ಬುಕ್‍ಗಳು, ಡ್ರಾಯಿಂಗ್ ಮತ್ತು ಗ್ರಾಫ್ ಪುಸ್ತಕಗಳ ಹೊರತಾಗಿ, ಕಾಗದ ವಿಭಾಗವು ಕಂಪ್ಯೂಟರ್ ಸ್ಟೇಷನರಿ, ಸೆಕ್ಯುರಿಟಿ ಪ್ರಿಂಟೆಡ್ ಸರ್ಟಿಫಿಕೇಟ್ ಸೇರಿದಂತೆ ಶಾಲಾ ಮತ್ತು ಕಚೇರಿ ಲೇಖನಸಾಮಗ್ರಿಗಳ ಸಂಪೂರ್ಣ ಶ್ರೇಣಿಯನ್ನು ಹೊಂದಿದೆ.

ಕಂಪನಿಯು ರಾಜ್ಯಾದಾದ್ಯಂತ ಇರುವ 6 ಶಾಖೆಗಳು ಮತ್ತು 8 ಡಿಪೋಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು, ಮೈಸೂರು, ದಾವಣಗೆರೆ, ಹಾಸನ, ಹುಬ್ಬಳ್ಳಿ, ಮಂಗಳೂರು, ಕಲಬುರ್ಗಿ ಮತ್ತು ವಿಜಯಪುರಗಳಲ್ಲಿ ತನ್ನ ಡಿಪೋಗಳನ್ನು ಹೊಂದಿದೆ. ನೋಟ್ ಪುಸ್ತಕಗಳು, ಶಾಲಾ ಬ್ಯಾಗ್‍ಗಳು ಮತ್ತು ಲೇಖನ ಸಾಮಗ್ರಿಗಳ ಮಾರಾಟಕ್ಕೆ “ವಿದ್ಯಾ” ಮತ್ತು “ಲೇಖಕ್” ಬ್ರಾಂಡ್ ಅದರ ಉತ್ತಮ ಗುಣಮಟ್ಟ, ಸೇವೆ ಮತ್ತು ದೃಡ ಮಾರುಕಟ್ಟೆಯಿಂದಾಗಿ ಇಂದಿಗೂ ಮನೆ ಮಾತಾಗಿದೆ.

ಎಂಎಸ್‍ಐಎಲ್ ಸಂಸ್ಥೆಯು “ವಿದ್ಯಾ” ಮತ್ತು “ಲೇಖಕ್” ಉತ್ಪನ್ನಗಳ ಉತ್ಪಾದನೆ ಮತ್ತು ವಿತರಣೆಯನ್ನು ನೋಡಿಕೊಳ್ಳುತ್ತದೆ. ಉತ್ಪಾದನಾ ಪ್ರಕಿಯೆಯು ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಹೊಂದಿದೆ. ಏಕೆಂದರೆ ಇದು ಹೆಚ್ಚಿನ ಸಂಖ್ಯೆಯ ಸಣ್ಣ-ಪ್ರಮಾಣದ ಉದ್ಯಮಗಳಿಗೆ ಉದ್ಯೋಗಾವಕಾಶವನ್ನು ನೀಡಿದೆ. ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಡಿಪೋಗಳ ಮೂಲಕ ವಿತರಣೆಯನ್ನು ನಡೆಸಲಾಗುತ್ತದೆ. ಆದರೆ ಶಾಲೆಗಳು, ಕಾಲೇಜುಗಳು ಮತ್ತು ಸಹಕಾರಿ ಸಂಘಗಳು ತಮಗೆ ಬೇಕಾದ ವಿನ್ಯಾಸಗಳೊಂದಿಗೆ ನೇರವಾಗಿ ಖರೀದಿಸಬಹುದು.

ವಿದ್ಯಾ ಮತ್ತು ಲೇಖಕ್ ಬಗ್ಗೆ:

ಲೇಖಕ್: ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕರ್ನಾಟಕ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಸಬ್ಸಿಡಿ ದರದಲ್ಲಿ ಲೇಖಕ್ ನೋಟ್ ಬುಕ್‍ಗಳನ್ನು ಪೂರೈಸಲು ಸಂಸ್ಥೆಯ ಕಾಗದ ವಿಭಾಗವನ್ನು 1974-75ರಲ್ಲಿ ಸ್ಥಾಪಿಸಲಾಯಿತು. ಕರ್ನಾಟಕದ ಅನುಮೋದಿತ ಸಮಿತಿಯು ನೋಟ್ ಬುಕ್‍ಗಳನ್ನು ತಯಾರಿಸಿದರೆ ಮಾರಾಟವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ನಡೆಸಲಾಯಿತು. ಸರ್ಕಾರದ ಸಬ್ಸಿಡಿಯಿಂದಾಗಿ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಕಾರಣದಿಂದಾಗಿ “ಲೇಖಕ್” ಜನಪ್ರಿಯ ಬ್ರಾಂಡ್ ಆಯಿತು.

ವಿದ್ಯಾ: 80ರ ದಶಕದ ಮಧ್ಯಭಾಗದಲ್ಲಿ ಸರ್ಕಾರವು ಕಾಗದದ ಮೇಲಿನ ಸಬ್ಸಿಡಿಯನ್ನು ಹಿಂತೆಗೆದುಕೊಂಡಾಗ, ಎಂಎಸ್‍ಐಎಲ್ 1986-87ರ ಅವಧಿಯಲ್ಲಿ ಸಾಮಾನ್ಯ ಮಾರುಕಟ್ಟೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಬರವಣಿಗೆಯ ಕಾಗದದೊಂದಿಗೆ “ವಿದ್ಯಾ” ಬ್ರಾಂಡ್‍ನ್ನು ಪರಿಚಯಿಸಿತು.