ನಮಸ್ಕಾರಗಳು,

ಮೈಸೂರ್ ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್ (ಎಂಎಸ್‍ಐಎಲ್) ಸಂಸ್ಥೆಯು 1966 ರಲ್ಲಿ ಸ್ಥಾಪನೆಗೊಂಡಿದ್ದು, ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುತ್ತದೆ. ಸಂಸ್ಥೆಯು ಪ್ರಾರಂಭವಾದಾಗಿನಿಂದ ಕರ್ನಾಟಕ ರಾಜ್ಯ ಸರ್ಕಾರ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ.

ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ನೋಟ್ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುವ ಉದ್ದೇಶದಿಂದ ಸಂಸ್ಥೆಯು ‘ವಿದ್ಯಾ’ ಹಾಗೂ ‘ಲೇಖಕ್’ ಹೆಸರಿನ ನೋಟ್‍ಪುಸ್ತಕಗಳನ್ನು ಮಾರುಕಟ್ಟೆಗೆ ಒದಗಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮದ್ಯಮ ಹಾಗೂ ಕೆಳವರ್ಗದ ಹಣಕಾಸಿನ ಅಗತ್ಯತೆಗಳಿಗೆ ಅನುಗುಣವಾಗಿ ಸಂಸ್ಥೆಯು ಚಿಟ್‍ಫಂಡ್ ವ್ಯವಹಾರವನ್ನು ಪ್ರಾರಂಭಿಸಿ, ನೋಂದಾಯಿಸದೆ ಅನಧಿಕೃತವಾಗಿ ವಹಿವಾಟು ನಡೆಸಿ ಜನರಿಗೆ ವಂಚಿಸುವಂತಹ ಚಿಟ್ ಆಯೋಜಕರಿಂದ ಸಂರಕ್ಷಿಸಲು ಕ್ರಮ ಕೈಗೊಂಡಿದೆ ಮತ್ತು ಪ್ರಧಾನಮಂತ್ರಿ ಜನೌಷಧಿ ಪರಿಯೋಜನೆಯಡಿ 80 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಎಂಎಸ್‍ಐಎಲ್ ಸಂಸ್ಥೆಯು ವಿವಿಧ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರಾರಂಭಿಸಿ ಜನರ ಆರೋಗ್ಯಕ್ಕೆ ಸಹಕಾರಿಯಾಗಿದೆ. ಚಿಲ್ಲರೆ ಮದ್ಯ ಮಾರಾಟ, ಸೋಲಾರ್ ವಾಟರ್ ಹೀಟರ್, ಲೇಖನ ಸಾಮಗ್ರಿಗಳು, ಪ್ರವಾಸ ಮತ್ತು ಪ್ರಯಾಣ, ಗ್ರಾಹಕ ಉತ್ಪನ್ನಗಳು ಹಾಗೂ ಇತರೇ ವ್ಯವಹಾರಗಳಲ್ಲಿ ಕೂಡ ತೊಡಗಿಸಿಕೊಂಡಿದೆ.

ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸೇವೆಯನ್ನು ಒದಗಿಸುವುದೇ ಸಂಸ್ಥೆಯ ದ್ಯೇಯೋದ್ದೇಶವಾಗಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಬೆಂಬಲಿಸಿ ಸಂಸ್ಥೆಯು ಅತ್ಯುನ್ನತ ಮಟ್ಟಕ್ಕೆ ಬೆಳೆಯಲು ಸಹಕಾರ ನೀಡಿದ ನಾಡಿನ ಜನತೆಗೆ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ. ಈ ಬೆಂಬಲವು ಸಾರ್ವಜನಿಕರಿಗೆ ಇನ್ನಷ್ಟು ಸೇವೆ ನೀಡಲು ಸ್ಫೂರ್ತಿದಾಯಕವಾಗಿರುತ್ತದೆ.

ಸಂಸ್ಥೆಯ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸೇವೆಯ ಹಿತದೃಷ್ಟಿಯಿಂದ ಉತ್ತಮ ಸಲಹೆ ಹಾಗೂ ಸಹಕಾರವನ್ನು ನೀಡಲು ಕೋರುತ್ತಾ ಎಂಎಸ್‍ಐಎಲ್ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುವುದಕ್ಕೆ ಕೈಜೋಡಿಸಲು ಮನವಿ ಮಾಡುತ್ತೇನೆ.

ಧನ್ಯವಾದಗಳೊಂದಿಗೆ,

ತಮ್ಮ ನಂಬುಗೆಯ,

ಹರತಾಳು ಹಾಲಪ್ಪ

ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು, ಎಂಎಸ್‍ಐಎಲ್